ಕವಲುತೋಕೆ ಹಕ್ಕಿ : ಪ್ಯಾಸೆರಿಫಾರ್ಮಿಸ್ ಗಣದ ಹಿರಂಡನಿಡೀ ಕುಟುಂಬಕ್ಕೆ ಸೇರಿದ ಒಂದು ಕೀಟಾಹಾರಿ ಹಕ್ಕಿ (ಸ್ವಾಲೊ). ಹಾಡುಹಕ್ಕಿಗಳಲ್ಲೆಲ್ಲ ಅತ್ಯಂತ ಚೆಲುವಾದ ಹಕ್ಕಿಯೆಂದು ಹೆಸರಾಗಿದೆ. ಹಾರುವಿಕೆಯ ವೇಗಕ್ಕೂ ಸೊಬಗಿಗೂ ಇದು ಬಹಳ ಪ್ರಸಿದ್ಧವಾಗಿದೆ. ವೈಜ್ಞಾನಿಕವಾಗಿ ಹಿರಂಡೊ ಎಂಬ ಜಾತಿಗೆ ಸೇರಿದೆ. ಇದೇ ಕುಟುಂಬಕ್ಕೆ ಸೇರಿದ ಪೆಟ್ರೊಕೆಲಿಡಾನ್, ಇರಿಡೊಪ್ರಾಕ್ನಿ ಮುಂತಾದ ಜಾತಿಯ ಹಕ್ಕಿಗಳನ್ನು ಸಾಮಾನ್ಯವಾಗಿ ಸ್ವಾಲೊಗಳೆಂದು ಕರೆಯುವುದುಂಟು. ಧ್ರುವ ಪ್ರದೇಶಗಳು ಮತ್ತು ಕೆಲವು ದ್ವೀಪಗಳನ್ನು ಬಿಟ್ಟರೆ ಪ್ರಪಂಚದ ಉಳೆದೆಲ್ಲ ಕಡೆಗಳಲ್ಲೂ ಇವುಗಳ ವ್ಯಾಪ್ತಿಯಿದೆ.
ಆಕಾರ ಮತ್ತು ಜೀವನಕ್ರಮದಲ್ಲಿ ಅಂಬಕ್ಕಿಗಳೊಡನೆ (ಸ್ವಿಫ್ಟ್‌) ಹೋಲಿಕೆಯಿದ್ದರೂ ಇವು ಅಂಬಕ್ಕಿಗಳಿಗಿಂತ ಭಿನ್ನ ರೀತಿಯವು.

ಕವಲುತೋಕೆ ಹಕ್ಕಿಗಳು ಸಾಧಾರಣವಾಗಿ ಗುಬ್ಬಚ್ಚಿಯಷ್ಟೇ ಗಾತ್ರದವು. ದೇಹದ ಬಣ್ಣ ಗಾಢನೀಲಿ, ಕಂದು ಮುಂತಾದ ವಿವಿಧ ರೀತಿಯದು. ಹೊಟ್ಟೆ ಬಿಳಿಯ ಬಣ್ಣದ್ದಾಗಿಯೂ ಕತ್ತು ಹಾಗೂ ತಲೆ ಕೆಂಪು ಬಣ್ಣದವಾಗಿಯೂ ಇವೆ. ಕಾಲು ಮತ್ತು ಉಗುರುಗಳು ಬಲವಾಗಿದ್ದರೂ ಬೆರಳುಗಳು ಮಾತ್ರ ದುರ್ಬಲವಾಗಿವೆ. ಬೆರಳುಗಳು ನೆಲದ ಮೇಲೆ ನಡೆದಾಡಲು ಅನುಕೂಲವಾಗಿಲ್ಲ. ರೆಂಬೆಗಳ ಮೇಲೊ ಕಡಿದಾದ ಬಂಡೆಗಳ ಮೇಲೊ ಕುಳಿತುಕೊಳ್ಳುವುದಕ್ಕೆ ಮಾತ್ರ ಸಹಾಯಕವಾಗಿವೆ. ಗೂಡುಕಟ್ಟಲು ಬೇಕಾಗುವ ಸಾಮಗ್ರಿಯ ಸಂಗ್ರಹಣೆಗೆ ಮಾತ್ರ ಇವು ನೆಲದ ಮೇಲೆ ಓಡಾಡುತ್ತವೆ. ಹಾರುವುದರಲ್ಲಿ ಈ ಹಕ್ಕಿಗಳು ನೈಪುಣ್ಯವನ್ನು ತೋರುತ್ತವೆ. ಹಾರುತ್ತಲೇ ಕೀಟಗಳನ್ನು ಕ್ಷಣಾರ್ಧದಲ್ಲಿ ಹಿಡಿದು ನುಂಗಬಲ್ಲುವು. ಹೀಗೆ ಆಹಾರವನ್ನು ಹಿಡಿಯಲೆಂದೇ ಕೊಕ್ಕು ಕೂಡ ಚಿಕ್ಕದೂ ಅಗಲವಾದುದೂ ಆಗಿದೆ. ಇವುಗಳ ಬಾಲ ಉದ್ದವಾಗಿದ್ದು ೧೨ ಗರಿಗಳಿಂದ ಕೂಡಿದೆ. ಅಲ್ಲದೆ ಎರಡು ಕವಲುಗಳಾಗಿ ಭಾಗವಾಗಿದೆ. ಇದರಿಂದಲೇ ಇವಕ್ಕೆ ಕವಲುತೋಕೆ ಹಕ್ಕಿಗಳೆಂದು ಹೆಸರು. ಇವು ಸಣ್ಣ ಸಣ್ಣ ಗುಂಪುಗಳಲ್ಲೊ ಜೋಡಿಯಾಗಿಯೊ ವಾಸಿಸುತ್ತವೆ. ಉಪದ್ರವಕಾರಿ ಕೀಟಗಳನ್ನು ಹಿಡಿದು ತಿನ್ನುವುದರಿಂದ ಮನುಷ್ಯನಿಗೆ ಪ್ರಿಯವೆನಿಸಿದ ಹಕ್ಕಿಗಳಿವು; ಮನುಷ್ಯನೊಡನೆ ಸ್ನೇಹಪರವಾದವೂ ಹೌದು. ಚೆನ್ನಾಗಿ ಹಾಡಲು ಬರದಿದ್ದರೂ ಇವುಗಳ ಚಿಲಿಪಿಲಿನಾದ ಇಂಪಾಗಿರುತ್ತದೆ.

ಇವುಗಳ ಸಂತಾನೋತ್ಪತ್ತಿಯ ಕಾಲ ಮಾರ್ಚ್ನಿಂದ ಸೆಪ್ಟೆಂಬರ್ ವರೆಗಿನ ತಿಂಗಳುಗಳು. ಮನೆಗಳ ಮೇಲ್ಚಾವಣಿಗಳಿಗೆ ಅಥವಾ ಬೆಟ್ಟಗುಡ್ಡಗಳಲ್ಲಿ ಹೊರಚಾಚಿದಂಥ ಬಂಡೆಗಳ ತಳಭಾಗಗಳಿಗೆ ಅಂಟಿಕೊಂಡಂತೆ ತಟ್ಟೆಯಾಕಾರದ ಗೂಡುಗಳನ್ನು ಕಟ್ಟುತ್ತವೆ. ಗೂಡು ಕಟ್ಟುವುದಕ್ಕೆ ಮಣ್ಣು ಮತ್ತು ಹುಲ್ಲು ಎರಡನ್ನೂ ಉಪಯೋಗಿಸುತ್ತವೆ. ಕೆಲವು ಹಕ್ಕಿಗಳು ನೆಲದಲ್ಲಿರುವ ಅಥವಾ ಮರಗಳಲ್ಲಿರುವ ಪೊಟರೆಗಳನ್ನು ಗೂಡುಗಳಾಗಿ ಉಪಯೋಗಿಸುವುದುಂಟು. ಸಾಧಾರಣವಾಗಿ ಪ್ರತಿವರ್ಷ ಒಂದೇ ಪ್ರದೇಶದಲ್ಲಿ ಗೂಡು ಕಟ್ಟುವುದು ಈ ಹಕ್ಕಿಗಳ ವಿಶಿಷ್ಟ ಲಕ್ಷಣ. ಹೆಣ್ಣು ಒಂದು ಸಲಕ್ಕೆ ೩-೬ ಮೊಟ್ಟೆಗಳನ್ನಿಡುತ್ತದೆ. ವರ್ಷಕ್ಕೆ ಒಂದು ಸಲ ಮೊಟ್ಟೆಯಿಡುವುದಾದರೂ ಹಲವು ಬಾರಿ ಎರಡನೆಯ ಸಲ, ಅಪೂರ್ವವಾಗಿ ಮೂರನೆಯ ಸಲ ಮೊಟ್ಟೆಯಿಡುವುದೂ ಉಂಟು. ಹೆಣ್ಣುಹಕ್ಕಿಯೊಂದೇ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿಮಾಡುತ್ತದೆ. ಮರಿಗಳು ೨೦-೨೪ ದಿವಸಗಳಲ್ಲಿ ಬೆಳೆದು ದೊಡ್ಡವಾಗಿ ಹಾರಲು ಶಕ್ತವಾಗುತ್ತವೆ. ಕೌಟುಂಬಿಕ ನಡೆವಳಿಕೆ, ಸಂತಾನ ಪ್ರೇಮ ಇವುಗಳಲ್ಲಿ ಉನ್ನತ ಮಟ್ಟದಲ್ಲಿ ಕಂಡುಬರುತ್ತದೆ. ಸಾಮಾನ್ಯವಾಗಿ ಮೊದಲ ಸಂತತಿಯ ಮರಿಗಳು ಗೂಡುಗಳ ಬಳಿಯೇ ಇದ್ದು ಅನಂತರದ ಸಂತತಿಯ ಮರಿಗಳ ಪಾಲನೆಯಲ್ಲಿ ಸಹಕರಿಸುತ್ತವೆ.
ಇವು ಬಹುದೂರ ವಲಸೆ ಹೋಗುವ ಹಕ್ಕಿಗಳೆಂದು ಹೆಸರಾಗಿವೆ. ಉದಾಹರಣೆಗೆ ಯುರೋಪು ಹಾಗೂ ಉತ್ತರ ಅಮೆರಿಕಗಳ ನಿವಾಸಿಯಾದ ಹಿರಂಡೊ ರಸ್ಟಿಕ ಎನ್ನುವ ಕವಲುತೋಕೆ ಹಕ್ಕಿ ಚಳಿಗಾಲದಲ್ಲಿ ಭಾರತಕ್ಕೂ ವಲಸೆ ಬರುತ್ತದೆ. ವಸಂತಋತುವಿನ ಆಗಮನದೊಂದಿಗೆ ಸ್ವಸ್ಥಳಕ್ಕೆ ಹಿಂತಿರುಗುತ್ತದೆ. ವಸಂತಕಾಲದ ಆರಂಭಕ್ಕೂ ಅದರ ಆಗಮನಕ್ಕೂ ಅತ್ಯಂತ ನಿಕಟವಾದ ಸಂಬಂಧವಿರುವುದರಿಂದ ಕವಲುತೋಕೆ ಹಕ್ಕಿಯನ್ನು ಒಳ್ಳೆಯ ಋತುವಿನ ಆಗಮನದ ಸುದ್ದಿ ತರುವ ದೂತ ಎನ್ನುವುದುಂಟು. ಇವುಗಳ ವಲಸೆಯ ಕ್ರಮ ಏನೇ ಇರಲಿ, ಕವಲುತೋಕೆಗಳು ಮಾನವನೊಂದಿಗೆ ಬಹಳ ನಿಕಟ ಸಂಬಂಧ ಕಲ್ಪಿಸಿಕೊಂಡಿವೆ. ಮಾನವನ ನೆಲೆಯ ಸಮೀಪದಲ್ಲಿಯೇ ಗೂಡು ಕಟ್ಟಿ ವಾಸಿಸುವ ಇವುಗಳ ಬಗ್ಗೆ ಗ್ರೀಕ್ ಇತಿಹಾಸದಲ್ಲೂ ಉಲ್ಲೇಖವಿದೆ. ಕೊರಿಯ ಮತ್ತು ಜಪಾನುಗಳಲ್ಲಿ ಇವು ಮನೆಗಳಲ್ಲಿ ಗೂಡುಕಟ್ಟುವುದು ಶುಭದ ಚಿಹ್ನೆಯೆಂಬ ಭಾವನೆಯಿದೆ. ಸಾಹಿತ್ಯದಲ್ಲಿ ಇವನ್ನು ಶ್ರದ್ಧೆ ಹಾಗೂ ಹಾರೈಕೆಗಳ ಸಂಕೇತವಾಗಿ ಬಳಸುವುದುಂಟು. ಕ್ರಿಶ್ಚಿಯನ್ ಧರ್ಮದಲ್ಲಿ ಕವಲುತೋಕೆಗಳು ದೇವನಲ್ಲಿ ಭಕ್ತನ ಮೊರೆಯ ಸಂಕೇತಗಳು.
ಭಾರತದಲ್ಲಿ ಕಾಣಬರುವ ಮುಖ್ಯವಾದ ಕವಲುತೋಕೆ ಹಕ್ಕಿಗಳಿವು: 
 ೧.	 ಹಿರಂಡೊ ರಸ್ಟಿಕ- ಯುರೋಪಿನಿಂದ ಚಳಿಗಾಲದಲ್ಲಿ ವಲಸೆ ಬರುವ ಹಕ್ಕಿ. ಏಪ್ರಿಲ್_ಮೇ ತಿಂಗಳುಗಳಲ್ಲಿ ಹಿಂತಿರುಗುತ್ತದೆ. ಕಡುನೀಲಿ ಬಣ್ಣದ್ದು. ಹಿಮಾಲಯದಲ್ಲಿ ೪,೦೦೦'-೭,೦೦೦' ಎತ್ತರದ ಪ್ರದೇಶಗಳಲ್ಲಿ ಗೂಡುಕಟ್ಟುತ್ತದೆ.
 ೨. ಹಿರಂಡೊ ಡೌರಿಕ (ಕೆಂಪುಪೃಷ್ಟದ ಕವಲುತೋಕೆ)- ದೇಹ ಕಡುನೀಲಿ ಬಣ್ಣದ್ದು. ಅಲ್ಲಲ್ಲಿ ಕಗ್ಗಂದು ಬಣ್ಣದ ಪಟ್ಟೆಗಳಿವೆ. ಹಿಮಾಲಯದಲ್ಲಿ ಹೆಚ್ಚು ಸಂಖ್ಯೆಯಲ್ಲಿವೆ.
 ೩. ಹಿರಂಡೊ ಸ್ಮಿತಿಯೈ (ತಂತಿಬಾಲದ ಕವಲುತೋಕೆ)_ ಉಳಿದವುಗಳಂತೆಯೆ ಕಡು ನೀಲಿ ಬಣ್ಣದ ದೇಹದ್ದು. ಆದರೆ ತಲೆ ಕೆಂಗಂದು ಬಣ್ಣದ್ಧಾಗಿದೆ. ತಂತಿಯನ್ನು ಹೋಲುವ ಎರಡು ಬಾಲಗಳಿರುವುದು ಇದರ ವೈಚಿತ್ರ್ಯ.
 ೪. ಹಿರಂಡೊ ಫ್ಲೂಮಿಕೊಲ- (ಗೆರೆ ಕವಲುತೋಕೆ) ಕೆಂಗಂದು ಬಣ್ಣದ ನೆತ್ತಿಯ ಸಣ್ಣ ಕವಲುತೋಕೆ, ಹೊಟ್ಟೆಯ ಭಾಗದಲ್ಲಿ ಉದ್ದಗೆರೆಗಳಿರುತ್ತವೆ. ಸಣ್ಣ ಕವಲು ಬಾಲ ಇದರ ವೈಶಿಷ್ಟ್ಯ. ಗುಬ್ಬಚ್ಚಿಗಳು ಇವುಗಳ ಗೂಡನ್ನು ಬಳಸಿಕೊಳ್ಳುವುದುಂಟು. ಕೆಲವೊಮ್ಮೆ ಈ ಕವಲುತೋಕೆಯನ್ನು ಓಡಿಸಿರುವ ಪ್ರಸಂಗಗಳೂ ಇವೆ.
 ೫. ಹಿರಂಡೊ ತಹಿಟಿಕ (ಸಾಮಾನ್ಯ ಅಥವಾ ಮೆಸಿಫಿಕ್ ಕವಲುತೋಕೆ)- ಕೆಂಗೆಂದು ಬಣ್ಣದ ತಲೆ, ಬಲವು ಆಳವಾಗಿ ಕವಲಾಗಿರುತ್ತದೆ. ಚಳಿಗಾಲದ ಅತಿಥಿ.	(ಎಚ್.ಬಿ.ಡಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ